ಇಚ್ಛೆ 1
ಬುದ್ಧಿಪೂರ್ವಕವಾಗಿ ತನಗೆ ಹಿತವೆಂದು ಕಂಡುಬಂದ ವಸ್ತುವಿಗೆ ಮಾನವ ತೋರುವ ಮಾನಸಿಕ ಅಪೇಕ್ಷೆ ಎಂದು ತತ್ತ್ವಶಾಸ್ತ್ರದಲ್ಲಿ ಹೇಳಿದೆ. ಪ್ರಾಣಿ ಸಹಜವಾದ ಬಯಕೆಯಲ್ಲ, ಇಚ್ಛೆಯಲ್ಲಿ ವಿಚಾರಶಕ್ತಿ ಅಡಗಿದೆ. ಆದ್ದರಿಂದ ನೈತಿಕದೃಷ್ಟಿಯಿಂದ ಮತ್ತು ವ್ಯಕ್ತಿತ್ವದ ದೃಷ್ಟಿಯಿಂದ ಇಚ್ಛೆಗೆ ಪ್ರಾಮುಖ್ಯ ಬಂದಿದೆ. ಇಚ್ಛೆಯಲ್ಲಿ ಮಾನವನ ಸ್ವಭಾವದ ಸತ್ತ್ವವಿದೆ. ಹಸಿವಾದಾಗ ಆಹಾರವನ್ನು ಬಯಸುವುದು ಪ್ರಾಣಿಸಹಜವಾದ ಬಯಕೆ. ಆದರೆ ಮಾನವನ ಧ್ಯೇಯಸಾಧನೆಗೆ ಅಡ್ಡಿಬಂದಾಗ ಮಾನವ ಆಹಾರವನ್ನು ಬಯಸಿದರೂ ಇಚ್ಛಿಸುವುದಿಲ್ಲ. 

ಇಚ್ಛೆ ಮಾನವನ ಶೀಲಕ್ಕನುಗುಣವಾಗಿರುತ್ತದೆ. ಅದು ಶೀಲವೆಂಬ ವೃತ್ತದಲ್ಲಿ ಒಂದು ರೇಖೆ. ಆ ವೃತ್ತದ ಆಚೆ ಅದಕ್ಕೆ ಯಾವ ಅರ್ಥವೂ ಇಲ್ಲ. ಒಬ್ಬನ ಇಚ್ಛೆಯಿಂದ ಅವನ ಶೀಲವನ್ನು ತಿಳಿಯಬಹುದು. ಇಚ್ಛೆ ಅವನ ಧ್ಯೇಯವನ್ನು ದೃಷ್ಟಿಕೋನವನ್ನು ಸೂಚಿಸುತ್ತದೆ. ಆದ್ದರಿಂದ ಇಚ್ಛೆ ಕ್ಷಣಿಕವಾದ ಮಾನಸಿಕ ಕ್ರಿಯೆಯಲ್ಲ. ಸಾಮಾನ್ಯ ಬಯಕೆಗಳಿಗಿಂತ ಅದು ತೀವ್ರವಾದುದು ಮತ್ತು ಅದರ ವ್ಯಾಪ್ತಿ ವಿಶಾಲವಾದುದು. ಮಾನವನ ಧ್ಯೇಯ ಬದಲಾದಾಗ ಅವನ ಇಚ್ಛೆಯ ಸ್ವರೂಪವೂ ಬದಲಾಗುತ್ತದೆ. ಅದಲ್ಲದೆ ಒಬ್ಬನೇ ವ್ಯಕ್ತಿಯಲ್ಲಿ ಅವನ ಸ್ವಭಾವ ವ್ಯತ್ಯಾಸವಾದಂತೆ ಇಚ್ಛೆಯೂ ವ್ಯತ್ಯಾಸವಾಗುತ್ತದೆ. ಬಾಲ್ಯದಲ್ಲಿ, ಯೌವನದಲ್ಲಿ, ಮುಪ್ಪಿನಲ್ಲಿ ಇಚ್ಛೆ ಬೇರೆ ಬೇರೆ ರೀತಿಯಾಗಿರುತ್ತದೆ. 

ಇಚ್ಛೆಗಳು ಪರಸ್ಪರ ವಿರೋಧಿಗಳಾಗಿ ಒಂದು ವ್ಯಕ್ತಿಯನ್ನು ಧರ್ಮಸಂಕಟಕ್ಕೀಡು ಮಾಡಬಹುದು. ಒಬ್ಬ ದೇಶಪ್ರೇಮಿ ಒಂದು ದೃಷ್ಟಿಯಿಂದ ಶಾಂತಿಯನ್ನೂ ಮತ್ತೊಂದು ದೃಷ್ಟಿಯಿಂದ ಯುದ್ಧವನ್ನೂ ಇಚ್ಛಿಸಬಹುದು. ಇಂಥ ಸಂದರ್ಭದಲ್ಲಿ ಆತ ಯುಕ್ತಾಯುಕ್ತ ಪರಿಜ್ಞಾನದಿಂದ ಒಂದು ಇಚ್ಛೆಗೆ ಮನಸ್ಸುಕೊಟ್ಟು ಮತ್ತೊಂದನ್ನು ತಳ್ಳಿಹಾಕುತ್ತಾನೆ. ಅವನ ಶೀಲದ ಪ್ರಬಲವಾದ ಪ್ರವೃತ್ತಿಯಂತೆ ಅವನ ಒಂದು ಇಚ್ಛೆ ಗೆಲ್ಲುತ್ತದೆ. ಪ್ರಬಲವಾದ ಇಚ್ಛೆ ಆಕಾಂಕ್ಷೆಯ ರೂಪವನ್ನು ತಾಳುತ್ತದೆ. ಹೀಗೆ ನೈತಿಕ ಜೀವನದಲ್ಲಿ ಇಚ್ಛೆ ಒಂದು ಮುಖ್ಯ ಅಂಗವಾಗಿದೆ.
(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ